ವಿಶ್ವ ಪ್ರಕೃತಿ ನಿಧಿ
(WWF). ವಿಶ್ವ ಪ್ರಕೃತಿ ನಿಧಿ, ವಿಶ್ವ ವನ್ಯಜೀವಿ ನಿಧಿ ಎಂಬ ಹೆಸರಿನೊಂದಿಗೆ 1961ರಲ್ಲಿ ಆರಂಭವಾಯಿತು. ಇದರ ಪ್ರಧಾನ ಕಛೇರಿ ಸ್ವಿಜûರ್‍ಲ್ಯಾಂಡ್‍ನಲ್ಲಿದೆ. ವಿನಾಶದಂಚಿನಲ್ಲಿರುವ ಕಪ್ಪು ಹಾಗೂ ಬಿಳಿ ಬಣ್ಣದ ಪಾಂಡ ಇದರ ಲಾಂಛನ.
ಪ್ರಾರಂಭಿಕ ವರ್ಷಗಳಲ್ಲಿ ಇದು ಧನ ಸಂಗ್ರಹಿಸಿ ವಿಶ್ವದಾದ್ಯಂತ ಅನೇಕ ಪಕೃತಿ ಸಂರಕ್ಷಣಾ ಕೆಲಸಗಳಿಗೆ ಧನ ಸಹಾಯ ಮಾಡಿತು. 1973ರಲ್ಲಿ ಭಾರತದಲ್ಲಿ ಮೊದಲಾದ ಮಹತ್ವಾಕಾಂಕ್ಷಿ ಯೋಜನೆ "ಪ್ರಾಜೆಕ್ಟ್ ಟೈಗರ್" ಸಹ ಇದರ ಫಲನುಭವಿ ಯೋಜನೆ.
1970ರ ಕೊನೆಗೆ ವಿಶ್ವ ಪ್ರಕೃತಿ ನಿಧಿ ಒಂದು ಅಂತರಾಷ್ಟ್ರೀಯ ಸಂಸ್ಥೆಯಾಗಿ ಬೆಳೆದು, ಅನೇಕ ಪರಿಸರ ಸಂರಕ್ಷಣಾ ಯೋಜನೆಗಳಲ್ಲಿ ತೊಡಗಿಸಿಕೊಂಡಿತು.
ಎಂಭತ್ತರ ದಶಕದಲ್ಲಿ ವನ್ಯಜೀವಿ ನಿಧಿ ತೊಡಗಿಸಿಕೊಂಡಿದ್ದ ಕೆಲಸಗಳ ಹಿನ್ನಲೆಗೆ ತಕ್ಕಂತೆ ತನ್ನ ಹೆಸರನ್ನು ಬದಲಾಯಿಸಿಕೊಳ್ಳಲು ಇಚ್ಛಿಸಿ, ವಿಶ್ವ ವನ್ಯಜೀವಿ ನಿಧಿ ಎಂಬ ಹೆಸರನ್ನು ವಿಶ್ವ ಪ್ರಕೃತಿ ನಿಧಿ ಎಂದು ಬದಲಾಯಿಸಿಕೊಂಡಿತು. ಈ ಹೆಸರು 1986ರಲ್ಲಿ, ಅಂದರೆ ಸಂಸ್ಥೆಯ ಬೆಳ್ಳಿ ಹಬ್ಬದ ವರ್ಷದಲ್ಲಿ ಚಾಲತಿಗೆ ಬಂದಿತು.
ವಿಶ್ವ ಪ್ರಕೃತಿ ನಿಧಿ - ಭಾರತ 1969ರಲ್ಲಿ ಅಸ್ಥಿತ್ವಕ್ಕೆ ಬಂದಿತು. ನಿಧಾನವಾಗಿ ದೇಶದಾದ್ಯಂತ ನೆಲೆಯೂರಿದ ವಿಶ್ವ ಪ್ರಕೃತಿ ನಿಧಿ, ಇಂದು ರಾಜ್ಯ, ವಿಭಾಗೀಯ ಹಾಗೂ ಕ್ಷೇತ್ರ ಕಾರ್ಯಾಲಯಗಳೂ ಸೇರಿದಂತೆ 25ಕ್ಕೂ ಹೆಚ್ಚು ಕಛೇರಿಗಳನ್ನು ಹೊಂದಿದ್ದು ಪ್ರಕೃತಿ ಹಾಗೂ ಮಾನವನ ನಡುವೆ ಸಾಮರಸ್ಯ ಮೂಡಿಸುವಲ್ಲಿ ಕೆಲಸ ಮಾಡುತ್ತಿದೆ. ಇಂದು ಈ ಸಂಸ್ಥೆ, ಪ್ರಭೇದ ಸಂರಕ್ಷಣಾ ಕಾರ್ಯಕ್ರಮ, ಸಿಹಿನೀರು ಹಾಗೂ ಜೌಗು ಪ್ರದೇಶ ಸಂರಕ್ಷಣೆ, ಅರಣ್ಯ ಹಾಗೂ ಜೀವಿ ವೈವಿಧ್ಯ ಸಂರಕ್ಷಣೆ, ಸಾಗರ ಹಾಗೂ ತೀರ ಪ್ರದೇಶಗಳ ಕಾರ್ಯಕ್ರಮ, ಪರಿಸರ ಶಿಕ್ಷಣ ಇವೇ ಮುಂತಾದ ಯೋಜನೆಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಪರಿಸರ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ, ಪ್ರಕೃತಿ ಶಿಕ್ಷಣವನ್ನು ಹಲವಾರು ವರ್ಷಗಳಿಂದ ನೀಡುತ್ತಾ ಬಂದಿದೆ. ಇದರ ಭಾಗವಾಗಿ 1976ರಲ್ಲಿ ಪ್ರಾರಂಭವಾದ "ಭಾರತ ಪ್ರಕೃತಿ ಸಂಘ"ಗಳು ಒಂದು ಚಳುವಳಿಯ ರೂಪದಲ್ಲಿ ಪರಿಸರ ಪರ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಪರಿಸರ ಶಿಕ್ಷಣಕ್ಕೆ ಈ ಸಂಘಗಳು ಹೆಚ್ಚಿನ ಒತ್ತು ನೀಡಿದೆ. 
	ಸಂಸ್ಥೆಯ ಕರ್ನಾಟಕ ರಾಜ್ಯ ಕೇಂದ್ರ 1976ರಲ್ಲಿ ಅಸ್ಥಿತ್ವಕ್ಕೆ ಬಂದಿತು. ಅಂದಿನಿಂದಲೂ ಪ್ರಕೃತಿ ಅಧ್ಯಯನಕ್ಕೆ ನೆರವಾಗುವ ಛಾಯಾಚಿತ್ರ ಪ್ರದರ್ಶನ, ಚಲನಚಿತ್ರ ಪ್ರದರ್ಶನ, ಚಾರಣ, ಸ್ಪರ್ಧೆಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು - ಮುಖ್ಯವಾಗಿ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು - ನಡೆಸುತ್ತಾ ಬಂದಿದೆ. ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಪ್ರಜ್ಞೆ ಮೂಡಿಸಲು ಶಿಕ್ಷಕರಿಗೆ ಹಲವಾರು ತರಬೇತಿ ಶಿಬಿರಗಳನ್ನು ಸಂಸ್ಥೆ ನಡೆಸುತ್ತಾ ಬಂದಿದೆ, ಎಷ್ಟೊ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಈ ಶಿಕ್ಷಣದಿಂದ ಪ್ರಭಾವಿತರಾಗಿ ಪರಿಸರ ಪರ ಸಂದೇಶವನ್ನು ಸಮಾಜಕ್ಕೆ ಮುಟ್ಟಿಸಿದ್ದಾರೆ. ಇದಲ್ಲದೆ ರಾಜ್ಯ ಕೇಂದ್ರ ಕಾಲದಿಂದ ಕಾಲಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.

ಲೇಖಕರು: ಎಸ್. ಕಾರ್ತಿಕೇಯನ್ ಕನ್ನಡಾನುವಾದ: ಕೆ.ಎಸ್. ನವೀನ್